[ದೇವಂಗಿ ಟಿ. ಚಂದ್ರಶೇಖರ್]
ಕುವೆಂಪು ಅವರ ಕಾರು ದೊಡ್ಡ ಸೇತುವೆಯ ಮೇಲೆ ಹರಿಯುತ್ತಿತ್ತು. ಸೇತುವೆಯ ಕೆಳಗೆ ತುಂಗೆ ಹರಿಯುತ್ತಿತ್ತು. ಪುಟ್ಟಪ್ಪನವರು ಬಲಗಡೆ ನೋಟ ಹಾಯಿಸಿ, ವಿಹಂಗಮಾವಲೋಕನ ಬೀರಿದರು. ಆ ನೋಟದ ಚೌಕಟ್ಟಿನೊಳಗಡೆ ತುಂಗೆಯ ಮಳಲತಡಿ, ಹೆಬ್ಬಂಡೆಗಳ ಹಿಂಡು, ಅವರ `ಕಾನೂರು ಸುಬ್ಬಮ್ಮ ಹೆಗ್ಗಡತಿ'ಯ ತೀರ್ಥಹಳ್ಳಿಯ ರಾಮ ಮಂಟಪದೆಡೆಯ ಕಲ್ಲುಸಾರ - ಇವು ಸುಳಿದು ಮಿಂಚಿದವು, ಮಾಯವಾದವು. ಅಷ್ಟರಲ್ಲಿ ಹದಿನಾಲ್ಕನೇ ಮೈಲಿಕಲ್ಲು ಬಂತು. ಕಾರು ನಿಲ್ಲಿಸಿದರು. "ಯಾಕಣ್ಣಾ?" ಎಂದರು ಮಕ್ಕಳು. ಪುಟ್ಟಪ್ಪನವರು ಕೆಳಗಿಳಿದು ಅಲ್ಲಿ ಸಮೀಪವಿದ್ದ ಟೆಲಿಗ್ರಾಫ್ ತಂತಿಯ ಕಂಬದ ಬಳಿಸಾರಿ, "ನೋಡಿ ಇದೇ ತಂತಿ ಕಂಬದ ಬುಡಕ್ಕೇ ಆಗಿನಿಂದಲೂ ಪುನುಗಿನ ಬೆಕ್ಕು ಪುನುಗು ಒರೆಸಿ ಹೋಗುತ್ತಿತ್ತು. ಎಷ್ಟೊ ಸಲ ಇಲ್ಲಿಂದ ಪುನುಗು ಸಂಗ್ರಹಿಸುತ್ತಿದ್ದೆವು" ಎಂದು ಹೇಳುತ್ತಾ ಬಂದು ಕುಳಿತರು. ಮುಂದೆ ತಿರಳೇಬೈಲು, ಕೆರೆ, ಮಾನಿಕೆರೆ, `ಕಾನೂರು ಸುಬ್ಬಮ್ಮ ಹೆಗ್ಗಡಿತಿ'ಯಲ್ಲಿನ ಗಾಡಿ ಉರುಳಿದ ಕೆರೆ- ಇವು ಮಾರ್ಗ ಮಧ್ಯೆ ಸುಳಿದು ಹಿಂದೆ ಸರಿದವು.