[ಅಲಿಗೆ ಪುಟ್ಟಯ್ಯ ನಾಯಕರು]
ಶ್ರೀ ಕುವೆಂಪು ಅವರಿಗೆ ತಾವು ಮೊದಲು ಭೂಸ್ಪರ್ಶ ಮಾಡಿದ ಸ್ಥಳವಾದ ಹಿರೇಕೊಡಿಗೆಯನ್ನು ಬಂದು ನೋಡಬೇಕೆಂದು ನಾನು ಪದೇ ಪದೇ ಪತ್ರ ಬರೆಯುತ್ತಿದ್ದೆ. ತಾವು ಹಿಂದೆ ಬಾಲ್ಯದಲ್ಲಿ ಅನುಭವಿಸಿದ ರಮಣೀಯ ಸ್ಥಳವಾಗಿದ್ದ ಹಿರೇಕೊಡಿಗೆಯನ್ನಷ್ಟನ್ನೇ ಕಾಣುವುದರ ಜೊತೆಗೆ ಇಂದು ಹಾಳು ಹಂಪೆಯಂತಿರುವ ಹಿರೇಕೊಡಿಗೆಯನ್ನು ನೋಡಬೇಕೆಂದೂ ಬರೆಯುತ್ತಿದ್ದೆ. ಮಹಾಕವಿ ಎಂದಿಗೆ ಬಂದಾರೊ ಎಂಬ ಉತ್ಕಟ ಆಸೆಯಿಂದಲೂ ನಿರೀಕ್ಷಿಸುತ್ತಿದ್ದೆ.
ಒಮ್ಮೆ ಕುವೆಂಪು ಅವರು ಶಿವಮೊಗ್ಗಕ್ಕೆ ಅವರ ಭಾವಮೈದುನ ರತ್ನಾಕರ ಅವರ ಮನೆಗೆ ಬಂದಾಗ ರತ್ನಾಕರರು ಎಂದಿನಂತೆಯೆ ನನಗೆ "ಪುಟ್ಟ ಭಾವ ಬಂದಿದ್ದಾರೆ, ಬನ್ನಿ" ಎಂದು ಪತ್ರ ಬರೆದರು. ನಾನು ಅಲ್ಲಿಗೆ ಹೋಗಿ ಕುವೆಂಪು ಅವರನ್ನು ಹಿರೇಕೊಡಿಗೆಗೆ ಆಹ್ವಾನಿಸಿ ಬಂದೆ. ಮಾರನೆಯ ದಿನ ಕುವೆಂಪು, ವೆಂಕಟೇಶ್, ರತ್ನಾಕರ, ಡಿ.ಟಿ. ಚಂದ್ರಶೇಖರ್ ಮತ್ತು ನಾಗೇಶ್ ಇವರೆಲ್ಲರೂ ಬಂದರು. ನಾನು ಸೇರಿ ಕುವೆಂಪು ಹುಟ್ಟಿದ ಸ್ಥಳವನ್ನು ನೋಡಲು ಹಿರೇಕೊಡಿಗೆಗೆ ಹೋದೆವು. ಮೊದಲು ಕುವೆಂಪುರವರ ಸೋದರ ಮಾವನಿಗೆ ಸೇರಿದ್ದ ತೋಟ ಈಗ ವೆಂಕಟರಾಮಭಟ್ಟರ ವಶದಲ್ಲಿದೆ. ಕುವೆಂಪುರವರ ತಾಯಿಯ ಮನೆ ನೆಲಸಮವಾಗಿದೆ. ನಾವು ಮೊದಲು ವೆಂಕಟರಾಮಭಟ್ಟರ ಮನೆಗೆ ಹೋದೆವು; ಅನಂತರ ತೋಟಕ್ಕೆ ಹೋದೆವು. ತೋಟ ಸೊಂಪಾಗಿ ಬೆಳೆದಿತ್ತು. ಅದನ್ನು ಕಂಡ ಕುವೆಂಪು "ನಮ್ಮ ಸೋದರ ಮಾವನೆ ಇದ್ದಿದ್ದರೂ ಈ ತೋಟವನ್ನು ಇಷ್ಟು ಚೆನ್ನಾಗಿ ಇಟ್ಟುಕೊಳ್ಳುತ್ತಿದ್ದರೋ ಇಲ್ಲವೊ, ಇವರು ಚೆನ್ನಾಗಿ ಇಟ್ಟುಕೊಂಡಿದ್ದಾರೆ. ಸಂತೋಷ" ಎಂದರು. ಕುವೆಂಪು ಹುಟ್ಟಿದ ಮನೆ ಇಂದು ತೋಟದ ಒಂದೆಡೆಯಲ್ಲಿ ಹಾಳು ಬಿದ್ದಿದೆ. ಆ ಪಾಳಿನಲ್ಲಿ ಕಸವನ್ನು ಹಾಕುವ ಒಂದು ಗಂಜಲದ ಗುಂಡಿಯೂ ಇದೆ. ಕುವೆಂಪು ಅದನ್ನೆಲ್ಲಾ ನೋಡುತ್ತಾ,
"ಇಲ್ಲಿ ನಾ ಹುಟ್ಟಿದ ಸ್ಥಳ ಎಲ್ಲಿ ?" ಎಂದರು.
ನಾನು "ನೀವು ಮೊದಲು ಭೂಸ್ಪರ್ಶ ಮಾಡಿದ ಸ್ಥಳ ಇದೇ" ಎಂದು ಗೊಬ್ಬರದ ಗುಂಡಿಯನ್ನು ತೋರಿಸಿದೆ. (ಕುವೆಂಪು ಅವರಿಗೆ ಅವರ ತಾಯಿ ಜನ್ಮ ಕೊಟ್ಟ ಸ್ಥಳ ಅದೇ ಆಗಿತ್ತು). ಕೂಡಲೆ ಕುವೆಂಪು ಜೋರಾಗಿ ನಗುತ್ತ ಹಣೆಯ ಮೇಲೆ ಕೈ ಇಟ್ಟು, "ಅಯ್ಯಯ್ಯೋ, ನಾನೀ ಗೊಬ್ಬರದ ಗುಂಡೀಲಿ ಹುಟ್ಟಿದೆನಾ ಮಾರಾಯ್ರ!?" ಎಂದರು. ನಿಜ ಅವರು ನಗುತ್ತಿದ್ದರು; ನಾನು ಅಳುತ್ತಿದ್ದೆ.
ಮುಂದೆ ತೋಟವನ್ನೆಲ್ಲ ಸುತ್ತಾಡುತ್ತ ಬಾಲ್ಯದಲ್ಲಿ ತಮಗೆ ಪರಿಚಿತವಾಗಿದ್ದ ಒಂದು ತೆಂಗಿನ ಮರವನ್ನು ನೋಡಿ ಗಟ್ಟಿಯಾಗಿ ನಗಲು ಪ್ರಾರಂಭಿಸಿದರು ಕುವೆಂಪು. ಆಗ ನಾನು ಆಶ್ಚರ್ಯ ಕುತೂಹಲದಿಂದ " ಏಕೆ ?" ಎಂದೆ.
ಕುವೆಂಪು; "ಈ ಮರ ನನ್ನನ್ನು ನೋಡಿ ನಗ್ತಾ ಇದೆ" ಎಂದರು.
ನಾನು; "ಏಕೆ?"
ಕುವೆಂಪು; "ಅದೇಕೆ ನಗುತ್ತಾ ಇದೆ ಅಂದರೆ,
"ಅಲ್ಲಾ ಹಿಂದೆ ನಾ ನೋಡ್ತ ಇದ್ದ ಹುಡುಗ ಇವನು, ಈ ಸಣ್ಣ ಪೋರ ನನ್ನ ಬುಡದ ಬಳಿ ಓಡಾಡಿ ಉಚ್ಚೆ ಗಿಚ್ಚೆ ಹೊಯ್ದು ಏನೇನೋ ಮಾಡ್ಕೊಂಡು ಆಡ್ತ ಇದ್ದ. ಇಂದು ತಲೆ ಕೂದಲೆಲ್ಲಾ ಹಣ್ಣಾಗಿ, ಮುದಿಯ ಆಗಿ ಬಂದಿದ್ದಾನೆ. ನಾನು ಇದ್ದ ಹಾಗೆ ಇದ್ದೀನಿ
" ಅಂತ ಹೇಳಿ ನಗುತ್ತಾ ಇದೆ" ಅಂದರು.