English Website

- ಜೀವನ ಚರಿತ್ರೆ - ಮೊದಲ ಇಂಗ್ಲಿಷ್ ಕವನ-
ಪೀಠಿಕೆ

ಕುವೆಂಪು ಅವರ ಜನನ, ಬಾಲ್ಯ ಹಾಗೂ ಜೀವನ

ಅಕ್ಷರಾಭ್ಯಾಸ - ಶಾಲಾಜೀವನ

ಬಾಲ್ಯದ ಗುರುವಾದ ಒಂದು ಕವಿತೆ

ಮೈಸೂರಿನಲ್ಲಿ ವಿದ್ಯಾಭ್ಯಾಸ

ಮೊದಲ ಇಂಗ್ಲಿಷ್ ಕವನ

ವಸಾಹತು ಸಂದರ್ಭದಲ್ಲಿ ಕರ್ನಾಟಕ

ಐರಿಷ್ ಕವಿ ಜೇಮ್ಸ್ ಎಚ್. ಕಸಿನ್ಸ್ರ ಭೇಟಿ  

ಕನ್ನಡದಲ್ಲಿ ಕವನ ರಚನೆ

ಕಲ್ಕತ್ತೆಗೆ ಪಯಣ

ಕೌಟುಂಬಿಕ ಜೀವನ

ಅಧ್ಯಾಪನ, ಸಾಹಿತ್ಯ ಸೃಷ್ಟಿ

೧೯೯೪ ರ ನಂತರದಲ್ಲಿ ಕವಿಮನೆ - ಕವಿಶೈಲ
 


[ಡಾ.ಕೆ.ಸಿ.ಶಿವಾರೆಡ್ಡಿಯವರ ಯುಗದ ಕವಿ ಪುಸ್ತಕದಿ೦ದ ಆಯ್ದ ಭಾಗ]

ಪುಟ್ಟಪ್ಪನವರು ಇಂತಹ ಹಲವು ಪ್ರೇರಣೆಗಳಿಗೆ ಒಳಗಾಗಿದ್ದರೂ ಕವನ ರಚಿಸಲು ತೊಡಗಿದ್ದು ಅಕಾವ್ಯಕ ಪ್ರೇರಣೆಯಿಂದೆಂಬುದು ಕುತೂಹಲ ಘಟನೆಯಾಗಿ ಕಾಣುತ್ತದೆ. ಪುಟ್ಟಪ್ಪನವರು ಆ ಘಟನೆಯನ್ನು ಈ ಮುಂದಿನಂತೆ ದಾಖಲಿಸುತ್ತಾರೆ.

``ನನಗೆ ನೆನಪಿರುವಂತೆ, ನನ್ನ ಮೊದಲ ಇಂಗ್ಲಿಷ್ ಪದ್ಯ ಅತ್ಯಂತ ಅಕಾವ್ಯಕ ಪ್ರೇರಣೆಯಿಂದ ತಯಾರಾದದ್ದು! ನನ್ನ ಗೆಳೆಯನೊಬ್ಬ ಚರಿತ್ರೆಯ ವಿದ್ಯಾರ್ಥಿ. ಚರಿತ್ರೆ ತನಗೆ ತಾನೆ ಅಂಥ ಕಷ್ಟಕೊಡುವ ವಿಷಯವಲ್ಲ. ನಾವು ಲೋವರ್ ಸೆಕೆಂಡರಿ ಓದುತ್ತಿರುವಾಗ ಎಂ.ಹೆಚ್. ಕೃಷ್ಣಯ್ಯಂಗಾರ್ ಬರೆದ `ಹಿಂದೂ ದೇಶದ ಚರಿತ್ರೆಯ ಸುಲಭ ಪಾಠಗಳು' ಎಂಬುದು ಪಠ್ಯಪುಸ್ತಕವಾಗಿತ್ತು. ಅದನ್ನು ನಾವು ಕಥೆ ಕಾದಂಬರಿ ಓದುವಂತೆ ಆಸ್ವಾದಿಸಿ ಓದುತ್ತಿದ್ದೆವು. ಕಷ್ಟವಾಗುತ್ತಿದ್ದುದು ಎಂದರೆ ಇಸವಿಗಳ ಪಟ್ಟಿ ಮತ್ತು ಹಾಳು ಗೌರ್ನರ್ ಜನರಲ್ಗಳ ಹೆಸರುಗಳ ಪಟ್ಟಿ. ಶಿವಾಜಿಯ ಕಥೆ ಮತ್ತು ಪಾಣೀಪತ್ತದ ಯುದ್ಧಗಳನ್ನು ಕುರಿತ ಕಥನ ಇವುಗಳನ್ನೆಲ್ಲ ಕಾದಂಬರಿ ಓದುವಂತೆ ಕಥೋತ್ಸಾಹದಿಂದ ಓದುತ್ತಿದ್ದೆವು. ಆದರೆ ಹೈಸ್ಕೂಲಿಗೆ ಬಂದೊಡನೆ ಇಂಗ್ಲಿಷ್ ಭಾಷೆಯಲ್ಲಿ ಚರಿತ್ರೆ ಓದಬೇಕಾಯಿತು.ಕಥೆ, ಕವಿತೆ, ನಾಟಕ, ಕಾದಂಬರಿಗಳನ್ನು ಇಂಗ್ಲಿಷಿನಲ್ಲಿಯೆ ಓದಿ ಆಸ್ವಾದಿಸುತ್ತಿದ್ದ ನನ್ನಂಥ ವಿದ್ಯಾರ್ಥಿಗೂ ಹಾಳು ಚರಿತ್ರೆಯನ್ನು ಇಂಗ್ಲಿಷ್ ಭಾಷೆಯಲ್ಲಿ ಓದುವುದು ತುಂಬ ನೀರಸವಾಗುತ್ತಿತ್ತು. ಇನ್ನು ಪಠ್ಯಪುಸ್ತಕವನ್ನಲ್ಲದೆ ಬೇರೆ ಪುಸ್ತಕ ಕೈಯಲ್ಲಿ ಮುಟ್ಟದಿದ್ದ ಇತರ ವಿದ್ಯಾರ್ಥಿಗಳ ಗತಿ? ಆ ನನ್ನ ಗೆಳೆಯ ಅಕ್ಬರನ ವಿಷಯವನ್ನೋ ಔರಂಗಜೇಬನ ವಿಷಯವನ್ನೋ ಪರೀಕ್ಷೆಗಾಗಿ ಬಾಯಿಪಾಠ ಮಾಡುತ್ತಿದ್ದ. ಮತ್ತೆ ಮತ್ತೆ ಮರೆತು ಹೋಗುತ್ತಿತ್ತು. ನಾನು ಅವನಿಗೆ ಹೇಳಿದೆ ಈ ಚರಿತ್ರೆಯ ಸಂಗತಿಗಳನ್ನು ನಾನು ಇಂಗ್ಲಿಷಿನಲ್ಲಿ ಪದ್ಯದಂತೆ ರಚಿಸಿಕೊಡುತ್ತೇನೆ, ಛಂದಸ್ಸು ಪ್ರಾಸಬದ್ಧವಾಗಿ. ಆಗ ಬಾಯಿಪಾಠ ಮಾಡಲು ಸುಲಭವಾಗುತ್ತದೆ. ಪರೀಕ್ಷೆಯಲ್ಲಿ ಆ ವಿಷಯಗಳನ್ನು, ಬಾಯಿಪಾಠ ಮಾಡಿದ ಪದ್ಯವನ್ನು ಹೇಳಿಕೊಂಡು ತಿಳಿದರೆ, ಬರೆಯಲು ಸುಲಭವಾಗುತ್ತದೆ - ಎಂದು. ಅವನು ಸಂತಸದಿಂದ ಹೂಗುಟ್ಟಿದ. ನಾನು `ಅಕ್ಬರ್ಸ್ ಟೂಂಬ್' ಎಂದೂ `ಔರಂಗಜೇಬ್ಸ್ ಟೂಂಬ್' ಎಂದೋ ಹೆಸರಿಟ್ಟುಕೊಂಡು ಒಂದಷ್ಟು ಪಂಕ್ತಿ ಪದ್ಯ ತಯಾರಿಸಿದೆ. ಆ ಪುಣ್ಯಾತ್ಮ ಅದನ್ನು ಸುಲಭದಲ್ಲಿ ಬಾಯಿಪಾಠ ಮಾಡಿ, ಬೇರೆ ವಿಷಯಗಳ ಮೇಲೂ ಇನ್ನಷ್ಟು ಪದ್ಯ ಬರೆದುಕೊಡಲು ಅಂಗಲಾಚಿದ. ವರ ಅನುಗ್ರಹಿಸುವ ದೇವತೆಯಂತೆ ನಾನೂ ಹೆಮ್ಮೆಯಿಂದಲೆ ಇನ್ನಷ್ಟು ಪದ್ಯ ತಯಾರಿಸಿಕೊಟ್ಟೆ. ಅದರಿಂದ ಅವನ ಪರೀಕ್ಷೆಗೆ ತುಂಬ ಅನುಕೂಲವಾಯಿತಂತೆ! ಹೇಗೋ ಅಂತೂ ಇಂಗ್ಲಿಷ್ನಲ್ಲಿ ಪದ್ಯ ರಚಿಸುವುದಕ್ಕೆ ಪ್ರಾರಂಭದ ಗುದ್ದಲಿಪೂಜೆಯಾಯಿತು ಆ ಘಟನೆ.''

ನಮ್ಮ ಬಗ್ಗೆ | ಸಂಪರ್ಕಿಸಿ
If you cannot view this page properly click here for help / guidance.


- Copyright © 2006 - 2007 kuvempu.com -