English Website

- ಜೀವನ ಚರಿತ್ರೆ - ಮೈಸೂರಿನಲ್ಲಿ ವಿದ್ಯಾಭ್ಯಾಸ -
ಪೀಠಿಕೆ

ಕುವೆಂಪು ಅವರ ಜನನ, ಬಾಲ್ಯ ಹಾಗೂ ಜೀವನ

ಅಕ್ಷರಾಭ್ಯಾಸ - ಶಾಲಾಜೀವನ

ಬಾಲ್ಯದ ಗುರುವಾದ ಒಂದು ಕವಿತೆ

ಮೈಸೂರಿನಲ್ಲಿ ವಿದ್ಯಾಭ್ಯಾಸ

ಮೊದಲ ಇಂಗ್ಲಿಷ್ ಕವನ

ವಸಾಹತು ಸಂದರ್ಭದಲ್ಲಿ ಕರ್ನಾಟಕ

ಐರಿಷ್ ಕವಿ ಜೇಮ್ಸ್ ಎಚ್. ಕಸಿನ್ಸ್ರ ಭೇಟಿ

ಕನ್ನಡದಲ್ಲಿ ಕವನ ರಚನೆ

ಕಲ್ಕತ್ತೆಗೆ ಪಯಣ

ಕೌಟುಂಬಿಕ ಜೀವನ

ಅಧ್ಯಾಪನ, ಸಾಹಿತ್ಯ ಸೃಷ್ಟಿ

೧೯೯೪ ರ ನಂತರದಲ್ಲಿ ಕವಿಮನೆ - ಕವಿಶೈಲ
 


[ಡಾ.ಕೆ.ಸಿ.ಶಿವಾರೆಡ್ಡಿಯವರ ಯುಗದ ಕವಿ ಪುಸ್ತಕದಿ೦ದ ಆಯ್ದ ಭಾಗ]

ಅನಂತರದ ಪುಟ್ಟಪ್ಪನವರ ವಿದ್ಯಾಭ್ಯಾಸ ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲಿ ಮುಂದುವರಿಯಿತು. ತಮ್ಮ ಶಾಲಾ ಜೀವನದಲ್ಲಿ ಇಂಗ್ಲಿಷ್ ಪಠ್ಯ ಪುಸ್ತಕಗಳಲ್ಲಿನ ಸಾಹಿತ್ಯ ಪುಟ್ಟಪ್ಪನವರನ್ನು ವಿಶೇಷವಾಗಿ ಆಕರ್ಷಿಸಿತು. ಪ್ರಿಚರ್ಡ್ ಎಂಬಾತ ಸಂಗ್ರಹಿಸಿದ್ದ `ಸ್ಟಡೀಸ್ ಇನ್ ಲಿಟರೇಚರ್' ಪುಟ್ಟಪ್ಪನವರ ಮೇಲೆ ಪ್ರಭಾವ ಬೀರಿದ ಮೊದಲ ಗ್ರಂಥ, ಮಹಾಸಾಹಿತಿಗಳ ಮತ್ತು ಮಹಾಕವಿಗಳ ಕೃತಿಗಳಿಂದ ಸಂಪಾದಿತಗೊಂಡ ಈ ಹೊತ್ತಗೆ ಇಂಗ್ಲಿಷ್ ಸಾಹಿತ್ಯದ ಹೊಸ ಲೋಕಕ್ಕೆ ಬಾಗಿಲು ತೆರೆಸಿತು. ಷೇಕ್ಸ್ಪಿಯರ್, ಮಿಲ್ಟನ್, ಕಾರ್ಲೈಲ್, ಗಿಬ್ಬನ್, ಡಾನಿಯಲ್ ಡೀಪೋ, ರಸ್ಕಿನ್ ಮೊದಲಾದ ಲೇಖಕರ ಕೃತಿಗಳ ಪರಿಚಯ ಇದರಿಂದ ಸಾಧ್ಯವಾಯಿತು. ಈ ಕೃತಿ ಕೊಟ್ಟ ಪ್ರೇರಣೆಯಿಂದ ಇಂಗ್ಲಿಷ್ ಸಾಹಿತ್ಯವನ್ನು ಅರಸುತ್ತ ಪುಟ್ಟಪ್ಪನವರು ಮೈಸೂರಿನ ಪಬ್ಲಿಕ್ ಲೈಬ್ರರಿಗೆ ಕಾಲಿಟ್ಟರು. ಆಗ ಅವರು ಅಲ್ಲಿ ಕಂಡ ದೃಶ್ಯ ಈ ಮುಂದಿನಂತಿದೆ.

``ಎದುರಿನ ವಿಭಾಗದಲ್ಲಿ ಸ್ಟ್ಯಾಂಡುಗಳ ಮುಂದೆ ನಿಂತು ಪತ್ರಿಕೆಗಳನ್ನು ಓದುತ್ತಿದ್ದರು ಕೆಲವರು. ಮತ್ತೆ ಕೆಲವರು ಅಲ್ಲಿಯೆ ಬಳಿಯಲ್ಲಿ ಹಾಕಿದ್ದ ದೊಡ್ಡ ಮೇಜಿನ ಸುತ್ತ ಇದ್ದ ಕುರ್ಚಿಗಳ ಮೇಲೆ ಕುಳಿತು ಮಾಸಪತ್ರಿಕೆಗಳನ್ನೋದುತ್ತಿದ್ದರು. ಅವರನ್ನೆಲ್ಲ ಹಾದು ಒಳಗೆ ಹೋದೆ. ನಾನು ಬೆರಗು ಬಡಿದಂತಾಗಿ ನಿಂತೆ, ಉನ್ನತವಾದ ಬೀರುಗಳಲ್ಲಿ ಕನ್ನಡ ಬಾಗಿಲುಗಳ ಹಿಂದೆ ಸಾಲ್ಗೊಂಡು ನಿಂತಿದ್ದ ಗ್ರಂಥರಾಶಿಗಳ ಮುಂದೆ! ಎಂತೆಂತಹ ಬಣ್ಣದ ಕ್ಯಾಲಿಕೋ ರಟ್ಟುಗಳಿಂದ ಶೋಭಾಯಮಾನವಾಗಿ ಮನಮೋಹಿಸುತ್ತಿವೆ ? ಅವುಗಳ ಹೆಸರುಗಳೋ ಚಿನ್ನದ ಅಕ್ಷರಗಳಲ್ಲಿ ರಂಜಿಸುತ್ತಿವೆ! ಇಂಗ್ಲಿಷ್ ಅಕ್ಷರಗಳು ಕವಾಯತುಮಾಡುವ ಸೈನಿಕರಂತೆ ಮಿಂಚುತ್ತಿವೆ!
The potential works of Tennyson!, the dramas of Shakspeare!, Miltons Paradise Lost ಇತ್ಯಾದಿ, ಇತ್ಯಾದಿ, ಇತ್ಯಾದಿ, ಬುಡದಿಂದ ನೆತ್ತಿಯವರೆಗೆ, ನೋಡಿದಷ್ಟೂ ಸಾಲದು; ನೋಡಿದಷ್ಟೂ ಕಣ್ಣು ತಣಿಯದು, ವಿಪುಲೈಶ್ವರ್ಯಮಯಿಯಾದ ಸಾಕ್ಷಾತ್ ತಾಯಿ ಸರಸ್ವತೀದೇವಿಯೆ, ಸೆರಗು ಒಸರಿಸಿ, ಸ್ವರ್ಣ ಕಲಶಸದೃಶ್ಯಗಳಾದ ತನ್ನ ದುಗ್ಧಪೀನ ಪಯೋಧರಗಳನ್ನು ತನ್ನ ಮುಗ್ಧ ಕವಿಕಂದನ ಮುಂದೆ ಚಾಚಿ ನಿಂತಂತಿತ್ತು, `ಬಾ ಪೀಯುಷ ಪಾನಗೈ!' ಎಂದು.''ಪುಟ್ಟಪ್ಪನವರ ಪ್ರೌಢಶಾಲೆಯ ಜೀವನ ಒಂದು ಕಡೆ ಆಂಗ್ಲ ಸಾಹಿತ್ಯದ ಶ್ರೀಮಂತಿಕೆಗೆ ಮನಸೋತರೆ, ಮತ್ತೊಂದು ಕಡೆ ರಾಷ್ಟ್ರಾದಾದ್ಯಂತ ಬಿರುಸಿನಿಂದ ಸಾಗುತ್ತಿದ್ದ ಸ್ವಾತಂತ್ರ್ಯ ಚಳುವಳಿಯು ಅವರನ್ನು ತನ್ನತ್ತ ಸೆಳೆಯತೊಡಗಿತ್ತು. ಈ ಎರಡೂ ವೈರುಧ್ಯಗಳೂ ಅವರ ಮುಂದಿನ ಸಾಹಿತ್ಯ ಕೃಷಿಯಲ್ಲಿ ವಿಶೇಷ ಪ್ರಭಾವ ಬೀರಿರುವುದನ್ನು ಅಧ್ಯಯನದಿಂದ ಕಂಡುಕೊಳ್ಳಬಹುದು.

ಪುಟ್ಟಪ್ಪನವರಿಗೆ ಪ್ರೌಢಶಾಲೆಯ ದಿನಗಳು ಒಳ್ಳೆಯ ಸ್ನೇಹಿತರನ್ನೂ, ಸಾಹಿತ್ಯ ಚಟುವಟಿಕೆಗಳ ವಾತಾವರಣವನ್ನೂ ಒದಗಿಸಿಕೊಟ್ಟವು. ಭೂಪಾಲಂ ಚಂದ್ರಶೇಖರಯ್ಯ ಮುಂತಾದ ಗೆಳೆಯರೊಡಗೂಡಿ ಸ್ಥಾಪಿಸಿದ ಪದ್ಮಪತ್ರ ಸಂಘ (ಲೋಟಸ್ ಲೀಫ್ ಯೂನಿಯನ್) ಇವರ ವಾಚನ, ಸಂವಾದಗಳಿಗೆ ಬುನಾದಿಯನ್ನು ಹಾಕಿತು. ಅಕಾಡೆಮಿಕ್ ಅಸೋಸಿಯೇಷನ್ನಂತಿರುವ ಈ ಸಂಘಕ್ಕೆ ಪುಟ್ಟಪ್ಪನವರು ಕಾರ್ಯದರ್ಶಿಗಳಾಗಿಯೂ ಕೆಲಸ ನಿರ್ವಹಿಸಿದರು. ಈ ಸಂಘದ ಸಾಹಿತ್ಯಕ ಚಟುವಟಿಕೆಗಳ ಸಂದರ್ಭದಲ್ಲಿ ಹಲವು ಸಾಹಿತ್ಯಾಸಕ್ತರ ಪರಿಚಯವಾಗಿ ಆತ್ಮೀಯತೆ ಬೆಳೆಯಿತು. ಹೀಗೆ ಪರಿಚಯವಾದ ಮುಖ್ಯರಲ್ಲಿ ನಾ. ಕಸ್ತೂರಿಯವರೂ ಒಬ್ಬರು. ಈ ಸಂಘದ ಕಾರ್ಯದರ್ಶಿಯಾಗಿದ್ದಾಗಲೇ ಶ್ರೀ ರಾಮಕೃಷ್ಣಾಶ್ರಮದ ಸ್ವಾಮಿ ಸಿದ್ಧೇಶ್ವರಾನಂದರ ಅಲ್ಪಸ್ವಲ್ಪ ಪರಿಚಯವೂ ಪುಟ್ಟಪ್ಪನವರಿಗಾಯಿತು. ಇವರ ಪ್ರತಿಭೆಯನ್ನು ಗಮನಿಸುತ್ತಿದ್ದ ಸಿದ್ಧೇಶ್ವರಾನಂದರು ಇವರು ಶಾಲಾದಿನಗಳಲ್ಲಿ ಮೈಸೂರಿನಲ್ಲಿ ಎದುರಿಸುತ್ತಿದ್ದ ಪರಕೀಯತನ, ವಸತಿ - ಊಟ - ಉಪಹಾರಗಳ ಕೊರತೆಯಿಂದ ಎದುರಾದ ಸಮಸ್ಯೆಗಳಿಗೆ ಪರಿಹಾರವೋ ಎನ್ನುವಂತೆ ಶ್ರೀ ರಾಮಕೃಷ್ಣಾಶ್ರಮದ ವಿದ್ಯಾರ್ಥಿನಿಲಯದಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟರು.

ಹಾಗಾಗಿ ರಾಮಕೃಷ್ಣಾಶ್ರಮ ಪುಟ್ಟಪ್ಪನವರಿಗೆ ಸುಮಾರು ಹನ್ನೆರಡು ವರ್ಷಗಳ ಕಾಲ ಆಶ್ರಯತಾಣವಾಯಿತು. ಪ್ರೌಢಶಾಲೆಯಿಂದ ಮೊದಲುಗೊಂಡು ಕಾಲೇಜು ವಿದ್ಯಾಭ್ಯಾಸವನ್ನು ಮುಗಿಸಿ, ಅಧ್ಯಾಪಕರಾಗಿ, ಸ್ವಂತ ಮನೆ ಕಟ್ಟುವವರೆಗೂ ಸ್ವಾಮಿ ಸಿದ್ಧೇಶ್ವರಾನಂದರ ಪ್ರೀತಿಪಾತ್ರರಾಗಿ ಆಶ್ರಮದಲ್ಲಿಯೆ ಇದ್ದರು. ಈವರೆಗಾಗಲೇ `ಬಿಗಿನರ್ಸ್ ಮ್ಯೂಸ್', `ಕಿಂದರಿ ಜೋಗಿ', `ಅಮಲನ ಕಥೆ', `ಹಾಳೂರು' ಇನ್ನೂ ಹಲವು ಕೃತಿಗಳು ಪ್ರಕಟಗೊಂಡಿದ್ದವು. ೧೯೨೦ ರಿಂದ ೧೯೨೭ರವರೆಗೆ ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲ್ ಮತ್ತು ಮಹಾರಾಜಾ ಕಾಲೇಜುಗಳಲ್ಲಿ ಪ್ರೌಢಶಾಲಾ ಮತ್ತು ಕಾಲೇಜು ಶಿಕ್ಷಣವನ್ನು ಪಡೆದರು. ಈ ಮಧ್ಯೆ ಅನೇಕ ಕೌಟುಂಬಿಕ ಹಾಗೂ ವೈಯಕ್ತಿಕ ಆಘಾತಗಳು ಪುಟ್ಟಪ್ಪನವರನ್ನು ಭಾದಿಸಿದ್ದವು. ೧೯೨೪ ರಲ್ಲಿ ತಾಯಿ ಸಾವನ್ನಪ್ಪಿದರು. ತಾಯಿಯ ಮರಣಾನಂತರದ ಕೆಲವೇ ವರ್ಷಗಳಲ್ಲಿ ಹೊಸದಾಗಿ ಮದುವೆಯಾಗಿದ್ದ ಅವರ ಸೋದರಿಯರಿಬ್ಬರೂ ಅರೆವಯಸ್ಸಿನಲ್ಲಿಯೇ ತೀರಿಕೊಂಡರು. ಈ ದಿನಗಳು ಪುಟ್ಟಪ್ಪನವರ ಮನೋವಿಲಕ್ಷಣತೆಯ ದಿನಗಳೂ ಆಗಿದ್ದವು. ಇಂಥ ವಿಲಕ್ಷಣತೆಯ ಸಂದರ್ಭದಲ್ಲಿ `ನಾನು ಪುಟ್ಟಪ್ಪನಲ್ಲ, ವಿವೇಕಾನಂದ' ನೆಂದು ಸಾರಿಕೊಂಡರು.

ಹೈಸ್ಕೂಲಿನ ಎರಡನೆಯ ಫಾರಂನಲ್ಲಿದ್ದಾಗಿನ ಸಾಹಿತ್ಯಕ ಜೀವನದ ಮುಖ್ಯ ಘಟನೆಗಳಲ್ಲಿ `ಬೊಮ್ಮನಹಳ್ಳಿಯ ಕಿಂದರಿಜೋಗಿ' ಬರೆಯಲು ಕಾರಣವಾದ ಸಂದರ್ಭವು ಅವರ ಬದುಕಿನಲ್ಲಿ ಮಹತ್ವವಾದುದು. ಅವರಿಗೆ ಇಂಗ್ಲಿಷ್ ಅಧ್ಯಾಪಕರಾಗಿದ್ದ ಶ್ರೀ ಸುಂದರ ಅವರು ಒಂದು ದಿನ ಬ್ರೌನಿಂಗ್ ಕವಿಯ `ಪೈಡ್ ಪೈಪರ್ ಆಫ್ ಹ್ಯಾಮಲಿನ್' ಅದನ್ನು ತರಗತಿಯಲ್ಲಿ ನಾಟಕೀಯವಾಗಿ ಓದಿ, ಇಂಗ್ಲೀಷಿನಲ್ಲಿಯೇ ಅಲ್ಲಲ್ಲಿ ತುಸು ವಿವರಣೆಯನ್ನೂ ಕೊಡುತ್ತಾ ತಾವೂ ಬಿದ್ದು ಬಿದ್ದು ನಗುತ್ತಾ ವಿದ್ಯಾರ್ಥಿಗಳನ್ನು ನಗೆಯ ಹೊನಲಿನಲ್ಲಿ ತೇಲಿಸಿಬಿಟ್ಟರು. `ಪೈಡ್ ಪೈಪರ್ ಆಫ್ ಹ್ಯಾಮಲಿನ್' ತನ್ನ ನೃತ್ಯಮಯ ಶೈಲಿಯಿಂದಲೂ, ಬಾಲಕ ಚೇತನಗಳಿಗೆ ಕಚಗುಳಿಯಿಟ್ಟು ನಗಿಸುವ ಹಾಸ್ಯದಿಂದಲೂ ಪುಟ್ಟಪ್ಪನವರ ಮೆಚ್ಚುಗೆಯನ್ನು ಸೂರೆಗೊಂಡಿತು. ಅದು ಎಷ್ಟರಮಟ್ಟಿಗೆ ಅವರ ಅಂತಃಕರಣದ ಭಾವಕೋಶವನ್ನು ಪ್ರವೇಶಿಸಿತ್ತು ಎಂದರೆ, ಮುಂದೆ ೧೯೨೬ರಲ್ಲಿ ಅಂದರೆ ಆರೇಳು ವರ್ಷಗಳ ತರುವಾಯ, ಶಿವಮೊಗ್ಗೆಯಲ್ಲಿ ಅವರು ಕಾಯಿಲೆಯಿಂದ ಗುಣಮುಖರಾಗುತ್ತಿದ್ದಾಗ ಆ ಕಥೆಯನ್ನು ಆಧರಿಸಿ ``ಬೊಮ್ಮನಹಳ್ಳಿಯ ಕಿಂದರಿಜೋಗಿ'' ಯನ್ನು ರಚಿಸಿದರು. ಆಗ ಅವರ ಬಳಿ ಇಂಗ್ಲಿಷ್ ಭಾಷೆಯ ಮೂಲಕವಿತೆ ಇರಲೆ ಇಲ್ಲವಂತೆ. (ಆದರೆ ಭಾಷಾಂತರವೂ ಅಲ್ಲದ, ಅನುವಾದವೂ ಅಲ್ಲದ, ಕೇವಲ ಆ ಕಥೆಯನ್ನು ಆಧರಿಸಿದ ರೂಪಾಂತರ ಸೃಷ್ಟಿ ಮಾತ್ರವಾಗಿರುವ ಅದನ್ನು ಅನೇಕರು ಬ್ರೌನಿಂಗ್ ಕವಿಯ ಕಥನ ಕವನದ ಭಾಷಾಂತರವೆಂದು ತಪ್ಪಾಗಿ ತಿಳಿದಿದ್ದಾರೆ ಎಂದು ಸ್ವತಃ ಪುಟ್ಟಪ್ಪನವರೆ ಅಭಿಪ್ರಾಯಪಡುತ್ತಾರೆ.)

ನಮ್ಮ ಬಗ್ಗೆ | ಸಂಪರ್ಕಿಸಿ
If you cannot view this page properly click here for help / guidance.


- Copyright © 2006 - 2007 kuvempu.com -