English Website

- ಜೀವನ ಚರಿತ್ರೆ - ಕೌಟುಂಬಿಕ ಜೀವನ -
ಪೀಠಿಕೆ

ಕುವೆಂಪು ಅವರ ಜನನ, ಬಾಲ್ಯ ಹಾಗೂ ಜೀವನ

ಅಕ್ಷರಾಭ್ಯಾಸ - ಶಾಲಾಜೀವನ

ಬಾಲ್ಯದ ಗುರುವಾದ ಒಂದು ಕವಿತೆ

ಮೈಸೂರಿನಲ್ಲಿ ವಿದ್ಯಾಭ್ಯಾಸ

ಮೊದಲ ಇಂಗ್ಲಿಷ್ ಕವನ

ವಸಾಹತು ಸಂದರ್ಭದಲ್ಲಿ ಕರ್ನಾಟಕ

ಐರಿಷ್ ಕವಿ ಜೇಮ್ಸ್ ಎಚ್. ಕಸಿನ್ಸ್ರ ಭೇಟಿ  

ಕನ್ನಡದಲ್ಲಿ ಕವನ ರಚನೆ

ಕಲ್ಕತ್ತೆಗೆ ಪಯಣ

ಕೌಟುಂಬಿಕ ಜೀವನ

ಅಧ್ಯಾಪನ, ಸಾಹಿತ್ಯ ಸೃಷ್ಟಿ

೧೯೯೪ ರ ನಂತರದಲ್ಲಿ ಕವಿಮನೆ - ಕವಿಶೈಲ
 


[ಡಾ.ಕೆ.ಸಿ.ಶಿವಾರೆಡ್ಡಿಯವರ ಯುಗದ ಕವಿ ಪುಸ್ತಕದಿ೦ದ ಆಯ್ದ ಭಾಗ]

ಸಂನ್ಯಾಸಿ ದೀಕ್ಷೆಯನ್ನು ಪಡೆದ ಪುಟ್ಟಪ್ಪನವರು ಸಂನ್ಯಾಸಿಯಾಗಿಯೇ ಮುಂದುವರಿಯುತ್ತಾರೆಂದು ಅನೇಕರ ಭಾವನೆಯಾಗಿತ್ತು. ಆದರೆ ಆಪ್ತರ ಒತ್ತಾಯ ಹಾಗೂ ಸಲಹೆಯ ಮೇರೆಗೆ ಕೊನೆಗೆ ಮದುವೆಗೆ ಒಪ್ಪಿಕೊಳ್ಳಲೇಬೇಕಾಯಿತು. ೧೯೩೭ರ ಏಪ್ರಿಲ್ ತಿಂಗಳಿನಲ್ಲಿ ದೇವಂಗಿಯ ರಾಮಣ್ಣಗೌಡರ ಪುತ್ರಿಯಾದ ಹೇಮಾವತಿಯವರ ಜೊತೆ ಪುಟ್ಟಪ್ಪನವರ ವಿವಾಹ ನೆರವೇರಿತು.

ತಾವು ಮದುವೆಯಾದ ಹೇಮಾವತಿ ತೊಟ್ಟಿಲು ಕೂಸಾಗಿದ್ದಾಗ, ಅವರಿಗೆ ಹೇಮಾವತಿ ಎಂದು ನಾಮಕರಣ ಮಾಡಿದವರು ಪುಟ್ಟಪ್ಪನವರೇ ಎನ್ನುವುದು ಒಂದು ಸೋಜಿಗ. ಮೈಸೂರಿನಲ್ಲಿ ಓದುತ್ತಿದ್ದಾಗ ರಜಕ್ಕೆಂದು ಕುಪ್ಪಳ್ಳಿಗೆ ಬಂದಿದ್ದ ಪುಟ್ಟಪ್ಪನವರು ರಾಮಣ್ಣಗೌಡರ ಜೊತೆ ನಂಬಳಕ್ಕೆ ಹೋದರು. ಹೇಮಾವತಿ ಆಗ ತೊಟ್ಟಿಲ ಕೂಸು. ಇಂಗ್ಲಿಷ್ ವಿದ್ಯಾಭ್ಯಾಸ ಮಾಡುತ್ತಿದ್ದ ಕವಿಹೃದಯ ಪುಟ್ಟಪ್ಪನವರ ಬಗೆಗೆ ಅವರ ನಂಟರಲ್ಲಿ ಒಂದು ಬಗೆಯ ಗೌರವ ಭಾವನೆ ಆಗಲೇ ಮೂಡಿತ್ತೆಂದರೆ ವಿಸ್ಮಯವಾಗುತ್ತದೆ. ಅವರು ನಂಬಳಕ್ಕೆ ಹೋದ ದಿನವೇ ಹೇಮಾವತಿಯನ್ನು ತೊಟ್ಟಿಲಿಗೆ ಹಾಕುವ ಶಾಸ್ತ್ರವೂ ಇತ್ತು. ಅಂದು ಮಾತು ಮಾತಿನ ನಡುವೆ ರಾಮಣ್ಣಗೌಡರು ತಮ್ಮ ಹೆಣ್ಣು ಮಗುವಿಗೆ ಒಂದು ಹೆಸರನ್ನು ಸೂಚಿಸುವಂತೆ ಪುಟ್ಟಪ್ಪನವರನ್ನು ಕೇಳಿಕೊಂಡರು. ಆಗ ಪುಟ್ಟಪ್ಪನವರು ಆ ತೊಟ್ಟಿಲ ಕೂಸಿಗೆ `ಹೇಮಾವತಿ' ಎಂದು ನಾಮಕರಣ ಮಾಡಿದರು. ಯೋಗಾಯೋಗವೋ ಎಂಬಂತೆ ಹದಿನಾರು ವರ್ಷಗಳ ತರುವಾಯ ೧೯೩೭ರಲ್ಲಿ ಹೇಮಾವತಿಯವರು ಕುವೆಂಪು ಅವರ ಸಹಧರ್ಮಿಣಿಯಾಗಿ ಉದಯರವಿಗೆ ಕಾಲಿಟ್ಟರು. ಮದುವೆಯು ನಿಶ್ಚಯವಾದ ಸಂದರ್ಭದಲ್ಲಿಯೇ ಸ್ವಾಮಿ ಸಿದ್ಧೇಶ್ವರಾನಂದರು ಮೈಸೂರ ಆಶ್ರಮದ ಅಧ್ಯಕ್ಷತೆಯಿಂದ ವರ್ಗವಾಗಿ ಹೋದ ಮೇಲೆ ಪುಟ್ಟಪ್ಪನವರು ಆಶ್ರಮವನ್ನು ಬಿಟ್ಟು ತಮ್ಮ ಸ್ವಂತ ಮನೆಯಲ್ಲಿ ನೆಲೆಸಲು ಇಚ್ಚಿಸುತ್ತಾರೆ. ಅಂದಿನಿಂದ `ಉದಯರವಿ'ಯೇ ಪುಟ್ಟಪ್ಪನವರ ಕೌಟುಂಬಿಕ ಹಾಗೂ ಸಾಹಿತ್ಯಕ ಬದುಕಿಗೆ ಆಸರೆಯಾಯಿತು. ೧೯೩೯ರಿಂದ ೧೯೪೫ರವರೆಗೆ ಬೆಂಗಳೂರಿನಲ್ಲಿ ಸಹಪ್ರಾಧ್ಯಾಪಕರಾಗಿ ಉದಯರವಿಯಲ್ಲಿಯೇ ಅಂದರೆ ೧೦-೧೧-೧೯೯೪ರಂದು ಅವರು ತಮ್ಮ ಕೊನೆಯುಸಿರು ಎಳೆಯುವವರೆಗೂ ಕಳೆದರು. ಪುಟ್ಟಪ್ಪನವರ ಮತ್ತು ಹೇಮಾವತಿಯವರ ಆದರ್ಶ ದಾಂಪತ್ಯದಲ್ಲಿ ನಾಲ್ವರು ಮಕ್ಕಳು ಜನಿಸಿದರು. ಪೂರ್ಣಚಂದ್ರ ತೇಜಸ್ವಿ (೧೯೩೮), ಕೋಕಿಲೋದಯ ಚೈತ್ರ (೧೯೪೧), ಇಂದುಕಲಾ (೧೯೪೩), ತಾರಿಣಿ (೧೯೪೫) ಇವರುಗಳೇ ಆ ನಾಲ್ವರು. ಇವರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಮುಂದೆ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರಾಗಿ, ತಮ್ಮ ಅನನ್ಯ ಕೃತಿಗಳ ಮೂಲಕ ವಿಶಿಷ್ಟ ವ್ಯಕ್ತಿತ್ವವನ್ನು ರೂಪಿಸಿಕೊಂಡರು. ಎರಡನೆಯವರಾದ ಕೋಕಿಲೋದಯ ಚೈತ್ರ ಇಂದು ಆಸ್ಟ್ರೇಲಿಯಾದಲ್ಲಿ ಪ್ರಸಿದ್ಧ ಡಿಸೈನ್ ಇಂಜಿನಿಯರ್, ಉದ್ಯಮಿಯೂ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಶ್ರೀಮತಿ ಇಂದುಕಲಾ ಅವರು ತಮ್ಮ ಎಂ.ಎ. ವಿದ್ಯಾಭ್ಯಾಸದ ಅನಂತರ ಹೆಸರಾಂತ ಆರ್ಥೋಸರ್ಜನ್ ಡಾ. ಕೆ.ಟಿ. ಸುರೇಂದ್ರ ಅವರನ್ನು ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದರು. (ಇಂದುಕಲಾ ಅವರು ಕೆಲವರ್ಷಗಳ ಹಿಂದೆ ೧೯೯೮ ರಲ್ಲಿ ನಿಧನರಾದರು.) ಶ್ರೀಮತಿ ತಾರಿಣಿ ಅವರು ತಮ್ಮ ವಿದ್ಯಾಭ್ಯಾಸದನಂತರ ಪೊ. ಕೆ. ಚಿದಾನಂದ ಅವರನ್ನು ವರಿಸಿ, ಪ್ರಸ್ತುತ ಉದಯರವಿಯಲ್ಲಿ ನೆಲೆಸಿದ್ದಾರೆ. ಇವರೆಲ್ಲರ ಮಕ್ಕಳೂ ಸಹ ಉನ್ನತ ವ್ಯಾಸಂಗವನ್ನು ನಡೆಸಿ, ಉನ್ನತ ಹುದ್ದೆಗಳಲ್ಲಿ ನೆಲಸುವುದರೊಂದಿಗೆ ಇಂದಿಗೂ ಪುಟ್ಟಪ್ಪನವರ ಕುಟುಂಬ ಒಂದು ಆದರ್ಶ ಕುಟುಂಬವಾಗಿ, ಅತ್ಯಂತ ಸರಳ ಸಜ್ಜನಿಕೆಗಳಿಂದ ಕೂಡಿದೆ.

ನಮ್ಮ ಬಗ್ಗೆ | ಸಂಪರ್ಕಿಸಿ
If you cannot view this page properly click here for help / guidance.


- Copyright © 2006 - 2007 kuvempu.com -